ಎಂಟಿಲೆಕಿ-
ಈ ತಾತ್ತ್ವಿಕ ಪದವನ್ನು ಮೊಟ್ಟಮೊದಲಿಗೆ ಉಪಯೋಗಿಸಿದವ ಅರಿಸ್ಟಾಟಲ್. ಅವನ ಪ್ರಕಾರ ಪ್ರತಿಯೊಂದು ವಸ್ತುವಿನಲ್ಲಿ ಅಂತಸ್ಥವಾಗಿರುವ ಆಧಾರದ್ರವ್ಯವನ್ನು ಕಾರ್ಯರೂಪಕ್ಕೆ ತಂದು ಆ ವಸ್ತುವಿನ ರೂಪಕ್ಕೆ ಕಾರಣವಾಗಬಲ್ಲ ಶಕ್ತಿ. ಅಂದರೆ ಯಾವುದಕ್ಕಾದರೂ ರೂಪನ್ನೋ ಪರಿಪೂರ್ಣತೆಯನ್ನೋ ಕೊಡಬಲ್ಲ ಶಕ್ತಿವಿಶೇಷ. ಈ ಶಕ್ತಿಯನ್ನು ದ್ರವ್ಯದ ಚೇತನ ಅಥವಾ ಆತ್ಮವೆಂದು ಭಾವಿಸಬಹುದು. ಹೀಗೆ ಭಾವಿಸಿದರೆ ಎಲ್ಲವೂ ಚೇತನ ಪ್ರೇರಿತ ವಸ್ತುಗಳೇ ಆಗಬೇಕಾಗುತ್ತದೆ. ಈ ಭಾವನೆ ಸರ್ವಾತ್ಮ ಅಥವಾ ಸಾರ್ವತ್ರಿಕ ಚೇತನವಾದವಾಗಿ ಪರಿಣಮಿಸುತ್ತದೆ. ಇದನ್ನು ಅರಿಸ್ಟಾಟಲ್ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಇಪ್ಪತ್ತು ಶತಮಾನಗಳ ಅನಂತರ ಬಂದ ಲೈಬ್ನಿಟ್ಸ್ (1646-1716) ಎಂಬ ಪಾಶ್ಚಾತ್ಯ ಜರ್ಮನ್ ತಾತ್ತ್ವಿಕ ಈ ಸರ್ವಾತ್ಮವಾದವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ. ಆತ ಅರಿಸ್ಟಾಟಲನ ಎಂಟಿಲೆಕಿಯನ್ನು ಮೋನ್ಯಾಡ್ ಅಂದರೆ ಚಿದಣು ಎಂದು ಕರೆದಿದ್ದಾನೆ. ಅವನ ಪ್ರಕಾರ ಮೋನ್ಯಾಡ್ ಅಪೃಥಕ್ಕರಣೀಯ ಪರಮಾಣು. ಇರುವುವೆಲ್ಲ ಚಿದಣುಗಳಿಂದ ಕೂಡಿವೆ. ಇವುಗಳಲ್ಲಿ ಕೆಳಗಿನಿಂದ ಮೇಲಿನವರೆಗೆ ನಿರಂತರವಾಗಿ ಅನೇಕಾನೇಕ ದರ್ಜೆಗಳಿವೆ. ಅತ್ಯಂತ ಕೆಳಗಿನವು ಕಲ್ಲು ಮುಂತಾದುವು. ಎಲ್ಲಕ್ಕಿಂತ ಮೇಲಿನ ಮೋನ್ಯಾಡ್ ಈಶ್ವರ. ಈ ಪ್ರಧಾನ ಮೋನ್ಯಾಡನ್ನು ಉಳಿದವು ವಿವಿಧ ಪ್ರಮಾಣಗಳಲ್ಲಿ ಪ್ರತಿಬಿಂಬಿಸುತ್ತವೆ.   
(ನೋಡಿ- ಆಧುನಿಕ-ಪಾಶ್ಚಾತ್ಯತತ್ತ್ವದ-ಮುನ್ನಡೆ) 
 			 			 						 (ಜೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ